ಜೀವನ ಎಂದರೆ ಇಷ್ಟೆಯೇ

 🔯 ನಮ್ಮ ಸನಾತನ ಸಂಸ್ಕೃತಿ.📖🔯

*ಜೀವನ ಎಂದರೆ ಇಷ್ಟೆಯೇ?*

ಪ್ರಪಂಚ ಸ್ಥಿರವಲ್ಲ, ಶಾಶ್ವತವಲ್ಲ. ನಾವೇ ಶಾಶ್ವತವಾಗಿ ಇಲ್ಲಿರಲೂ ಸಾಧ್ಯವಿಲ್ಲ...! ಆದರೆ ಇಂತಹ ಸ್ಥಿರವಲ್ಲದ, ಶಾಶ್ವತವಲ್ಲದ ಪ್ರಪಂಚದಲ್ಲಿ ನಮ್ಮ ಮನೆ, ಹೊಲ, ಗದ್ದೆ, ತೋಟ, ಬ್ಯಾಂಕ್ ಬ್ಯಾಲೆನ್ಸ್, ಶೇರು, ವ್ಯಾಪಾರ, ವ್ಯವಹಾರ, ಉದ್ದಿಮೆ, ನೌಕರಿ... ಇತ್ಯಾದಿ ಎಲ್ಲದರಲ್ಲೂ ಸ್ಥಿರವಾಗಿರಬೇಕೆಂದು ಬಯಸುತ್ತೇವೆ, ಇದು ವ್ಯವಸ್ಥಿತವಾಗಿ ಶಾಶ್ವತವಾಗಿ ಹೀಗೆಯೇ ಇರಲೆಂದು ಅಪೇಕ್ಷಿಸುತ್ತೇವೆ. ಇವುಗಳಲ್ಲಿ ಕೊಂಚ ಏರುಪೇರಾದರೂ ನಮಗೆ ದಿಗಿಲು, ಒಳಗೆ ಒತ್ತಡ. ಅಸ್ಥಿರ, ಅಶಾಶ್ವತ ಪ್ರಪಂಚದಲ್ಲಿ ಸ್ಥಿರವಾದ್ದನ್ನು, ಶಾಶ್ವತವಾದ್ದನ್ನು ಹುಡುಕುತ್ತೇವಲ್ಲ..! ನಮ್ಮಂತಹ ಭ್ರಮಿತರು ಇನ್ಯಾರು ಇರಲಿಕ್ಕಿಲ್ಲ. ತಪ್ಪಲ್ಲ, ಆದರೆ ಒಪ್ಪೂ ಅಲ್ಲ. ನಾವು ಇಲ್ಲಿಯೇ ಶಾಶ್ವತವಾಗಿ ಉಳಿಯಲು ಬಂದಿಲ್ಲ ಎಂಬ ಅರಿವಿರಬೇಕು. ಅಂಟಿಕೊಳ್ಳಬಾರದು ಪ್ರಪಂಚಕ್ಕೆ. ತಾವರೆಯ ಎಲೆಯ ಮೇಲಿನ ನೀರ ಹನಿಯಂತಿರಬೇಕು, ಅಂಟಿಯೂ ಅಂಟದಂತೆ.


ನಾವು ಕಟ್ಟಿಕೊಂಡ ಕನಸುಗಳು, ಭ್ರಮೆಗಳು, ಆಸೆ ಆಕಾಂಕ್ಷೆಗಳು ನುಚ್ಚು ನೂರಾಗಲು ಎಷ್ಟರ ಸಮಯ..!? ಹೀಗೆ ಅಲುಗಾಡಿಸಿ ಬಿಸಾಕಿಬಿಟ್ಟರಾಯ್ತು ನಾವು ನಿಂತ ನೆಲವನ್ನು. ಈಚೆಗೆ ನೋಡಿದೆವಲ್ಲ ಕೇರಳ, ಕೊಡಗು, ಉತ್ತರ ಕರ್ನಾಟಕದಲ್ಲಿ ಆದ ಜಲಪ್ರಳಯ, ಭೂಕುಸಿತಗಳನ್ನು. ಹಿಂದೆ ಜಪಾನು, ಇಂಡೋನೇಷ್ಯಾ ಮತ್ತಿತರ ದೇಶಗಳಲ್ಲಾದ ತ್ಸುನಾಮಿ, ಚಂಡಮಾರುತ, ಭೂಕಂಪ ಮುಂತಾದ ಪ್ರಾಕೃತಿಕ ವಿಕೋಪಗಳನ್ನು ನೋಡಿದ್ದೆವಲ್ಲ. ಪ್ರಕೃತಿಗೆ ಅರೆಕ್ಷಣವೂ ಬೇಕಾಗುವುದಿಲ್ಲ, ನಾವು ಕಟ್ಟಿಕೊಂಡ ಮಹಲುಗಳನ್ನು, ಬೃಹತ್ ಕಟ್ಟಡಗಳನ್ನು, ರಸ್ತೆ, ಸೇತುವೆ ಇತ್ಯಾದಿಗಳನ್ನು ಗುಡಿಸಿ ಗುಂಡಾಂತರ ಮಾಡಲು.


ಪ್ರಪಂಚ ಸ್ಥಿರವಲ್ಲ, ಈ ಜೀವನ ನಶ್ವರ ಎಂಬುದು ತಿಳಿದಿದ್ದರೂ ಬದುಕುವ ಅದಮ್ಯ ಆಸೆಯಿಂದ ಹೋರಾಡುತ್ತಿದ್ದೇವಲ್ಲ, ಇದೇ ಆಶ್ಚರ್ಯಕರ. ಕ್ಷಣಗಳು, ನಿಮಿಷಗಳು, ಗಂಟೆಗಳು, ದಿನ, ವಾರ, ತಿಂಗಳು, ವರುಷಗಳು ಕಳೆದಂತೆಲ್ಲಾ ನಮ್ಮ ಆಯುಷ್ಯ ಕ್ಷೀಣಿಸುತ್ತಾ ದಿನೇ ದಿನೇ ನಾವು ಸಾವಿಗೆ ಸಮೀಪಿಸುತ್ತಿದ್ದರೂ ಆಸೆಗಳು ಮಾತ್ರ ಅದಕ್ಕೆ ವಿರುದ್ಧವಾಗಿ ಆಗಸದೆತ್ತರಕ್ಕೆ ಬೆಳೆಯುತ್ತಲೇ ಇರುತ್ತವಲ್ಲ, ಇದಲ್ಲವೆ ಬದುಕಿನ ವಿಸ್ಮಯ.


ಜೀವನ ಎಂದರೆ ಇಷ್ಟೆಯೇ? ಹುಟ್ಟು, ಶೈಶವ, ಬಾಲ್ಯ, ಯೌವ್ವನ, ದುಡಿಮೆ, ಮದುವೆ, ಮಕ್ಕಳು, ಮೊಮ್ಮಕ್ಕಳು, ವೃದ್ಧಾಪ್ಯ ನಂತರ ಸಾಯುವುದು. ಇಷ್ಟೆಯೇ..!? ಹಾಗಾದರೆ ಬಾಳಿನ ಗುರಿಯಾದರೂ ಯಾವುದು? ಆದರ್ಶವಾದರೂ ಏನು? ಅಧಿಕಾರ, ಅಂತಸ್ತುಗಳ ಪಡೆಯುವುದೇ..? ಕೀರ್ತಿಪ್ರತಿಷ್ಠೆಗಳೇ..? ಧನಸಂಪತ್ತೇ..?


ಯಾರ ಮುಂದೆ ಪ್ರದರ್ಶನ ಮಾಡಬೇಕಾಗಿದೆ ನಮ್ಮ ಆಸ್ತಿ, ಅಂತಸ್ತು, ಸಂಪತ್ತುಗಳ.. ಒಡವೆ ವಸ್ತ್ರಗಳ.. ಶಾರೀರಿಕ ಸೌಂದರ್ಯವ... ನಮ್ಮಂತೆಯೇ ಹುಟ್ಟಿ ಒಂದು ದಿನ ಸಾಯುವ ಹುಲುಮಾನವರ ಮುಂದೆಯೇ... ಯಾರ ಮೆಚ್ಚಿಸಲು ಈ ಬದುಕು.. ಇಲ್ಲಿ ನಮ್ಮಿಚ್ಛೆಯಿಂದಲ್ಲ, ನಮಗೋಸ್ಕರವಲ್ಲ, ಬೇರೆಯವರ ಹಿತಕ್ಕಾಗಿಯೂ ಅಲ್ಲ... ಬೇರೆಯವರು ಮೆಚ್ಚಲೆಂಬ ಪ್ರದರ್ಶನ ಪ್ರಿಯತೆಯ ಬದುಕು... ಅದಕ್ಕಾಗಿ ನಾವೆಲ್ಲ ಎಷ್ಟೆಷ್ಟು ತ್ಯಾಗ ಮಾಡುತ್ತೇವಲ್ಲ... ನಮ್ಮ ಸಮಯ, ಹಣ, ದುಡಿಮೆ, ನೆಮ್ಮದಿ, ಶಾಂತಿ... ಬದುಕೆಲ್ಲ ಇತರರ ಮೆಚ್ಚಿಸುವುದಕ್ಕೇ ಕಾಲ ಕಳೆಯುತ್ತೇವಲ್ಲ.


ನಮ್ಮಷ್ಟಕ್ಕೇ ನಾವು ಬದುಕಲು ಬಹಳ ಬೇಕಿಲ್ಲ. ಆದರೆ ಇತರರನ್ನು ನೋಡಿ ಬದಕಲು ನಮ್ಮ ದುಡಿಮೆ ಸಾಕಾಗುವುದಿಲ್ಲ... ಅದಕ್ಕಾಗಿ ಸಾಲ, ಲಂಚ, ಜೂಜು, ಬೆಟ್ಟಿಂಗ್ ಇತ್ಯಾದಿ ಅಕ್ರಮಗಳು ಹುಟ್ಟಿಕೊಳ್ಳುತ್ತಾ ಹೋಗುತ್ತವೆ. 


ಇದೆಕ್ಕೆಲ್ಲ ದಿವ್ಯೌಷಧವೇ ಆಧ್ಯಾತ್ಮಿಕ ಜ್ಞಾನ.


ಶಿವೋಹಂ.. 🙏🙏🙏

*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏

*!! ಶ್ರೀಕೃಷ್ಣಾರ್ಪಣಮಸ್ತು !!*

*ಅಡ್ಮಿನ್ ಬಳಗ.*

ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.

ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.

ಮೊಬೈಲ್ +919945295560.

ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.

Comments

Popular posts from this blog

ತ್ರಿಕೂಟೇಶ್ವರ ದೇವಸ್ಥಾನ.ಗದಗ

ಇಂತಹ ತಪ್ಪು ಮಾಡಿದರೆ ಪೂರ್ವಿಕರ ಆಗ್ರಹ‌ ಖಚಿತ

ಶಾಸ್ತ್ರೋಕ್ತ ಸಂಪ್ರದಾಯಗಳು